ನಲವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಡಿಂಗ್ರಿ ನಾಗರಾಜ್ ಇಲ್ಲಿಯವರೆಗೂ 780ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ. ಎರಡು ವರ್ಷದ ಹಿಂದೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಬಾಯ್ತಪ್ಪಿ ಮಡಿವಾಳ ಜನಾಂಗದವರ ಕುರಿತಂತೆ ಅಸಂಭಾವ್ಯ ಪದ ಬಳಸಿರುತ್ತಾರೆ. ಇದಕ್ಕೆ ಈಗ ಆಯಾ ಜನಾಂಗದವರು ಆಕ್ಷೇಪಣೆ ವ್ಯಕ್ತಪಡಿಸಿ ಗಂಭೀರ ದೂರನ್ನು ನೀಡಿದ್ದರು. ಅಲ್ಲದೆ ಬೆದರಿಕೆ ಕರೆಗಳು ಬರುತ್ತಿದ್ದವು.
ನಂತರ ಅವರು ಸಂಘದವರೊಂದಿಗೆ ಮಾತನಾಡಿ, ಮತ್ತೋಂದು ಸಂದರ್ಶನದಲ್ಲಿ ಎಲ್ಲರ ಎದುರು ಕ್ಷಮೆ ಕೋರಿಕೊಂಡಿರುತ್ತಾರೆ. ಇದು ಸಾಕಾಗುವುದಿಲ್ಲವೆಂದು ತಿಳಿದು, ಇಂದು ಸುದ್ದಿಗೋಷ್ಟಿ ನಡೆಸಿ ಮಾಧ್ಯಮದ ಎದುರು ಕ್ಷಮೆ ಕೋರಿಕೊಂಡು, ಇನ್ನು ಮುಂದೆ ಇಂತಹ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳುತ್ತೇನೆಂದು ಹೇಳಿದರು. ಆಕಸ್ಮಿಕವಾಗಿ ನುಡಿದಿದ್ದಕ್ಕೆ ಸಮಾಜ, ಜನಾಂಗಕ್ಕೆ ಕ್ಷಮೆ ಯಾಚಿಸುವುದರ ಮೂಲಕ ಪ್ರಕರಣಕ್ಕೆ ಮಂಗಳ ಹಾಡಲು ಕೋರಿದರು. ಹಾಗೂ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆನೆಂದು ಮಾಹಿತಿ ನೀಡಿದರು.